phone 0816-2278177 email info@tumkurdccbank.com

ಅಧ್ಯಕ್ಷರ ನುಡಿ

ಆತ್ಮೀಯ ಕಲ್ಪತರು ನಾಡಿನ ಸಹಕಾರಿ ಬಂಧುಗಳೇ,

ನಮ್ಮ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತನ್ನ 69 ವರ್ಷಗಳ ಸ್ಮರಣೀಯ ಸೇವೆಯನ್ನು ಪೂರೈಸಿರುವ ಈ ಸಂದರ್ಭದಲ್ಲಿ ಬ್ಯಾಂಕಿನ ಇತಿಹಾಸದ ಸಿಂಹಾವಲೋಕನ ಮಾಡಿದಾಗ, ಅದರ ದೃಢ ಮತ್ತು ನೇರ ಹೆಜ್ಜೆಗಳ ಸಾಧನೆ ಮುಂದಿನ ಸುಭದ್ರತೆಯ ಹಾದಿಗೆ ಕೈಗನ್ನಡಿಯಾಗಿರುತ್ತದೆ.

ಜಿಲ್ಲೆಯ ಅಚ್ಚುಮೆಚ್ಚಿನ ನಮ್ಮ ರೈತಾಪಿಗಳಾದ ತಾವು ಬ್ಯಾಂಕಿನ ಮೇಲೆ ಇರಿಸಿರುವ ಅಪರಿಮಿತ ವಿಶ್ವಾಸ ಹಾಗೂ ತಾವುಗಳು ನೀಡುತ್ತಿರುವ ಸಂಪೂರ್ಣ ಸಹಕಾರದಿಂದ ಬ್ಯಾಂಕು ಯಶಸ್ಸಿನ ಮೆಟ್ಟಿಲೇರುತ್ತಿದ್ದು, ತಾವೆಲ್ಲ ನಮ್ಮ ಬ್ಯಾಂಕನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯುವ ಮಹದಾಸೆಯಿಂದ ಈ ಸಾಲಿನ ಅಂದರೆ 2023-24ನೇ ಸಾಲಿನ ಬ್ಯಾಂಕಿನ ಪ್ರಗತಿಯನ್ನು ತಮ್ಮೆಲ್ಲರ ಮುಂದೆ ಹಂಚಿಕೊಳ್ಳಲು ಹರ್ಷಿಸುತ್ತೇನೆ.

ವರದಿ ಸಾಲಿನಲ್ಲಿ ನಮ್ಮ ಜಿಲ್ಲೆಯ ಆರ್ಥಿಕ ಸಾಮಥ್ರ್ಯ ಕೃಷಿ /ಕೃಷಿಯೇತರ ಚಟುವಟಿಕೆಗಳು ಉತ್ತಮವಾಗಿದ್ದು, ಬ್ಯಾಂಕಿನ ವ್ಯವಹಾರಕ್ಕೆ ಪೂರಕವಾಗಿರುವ ಜಿಲ್ಲೆಯ ಇತರೆ ಪ್ರದೇಶಗಳಲ್ಲಿ ಶಾಖೆಗಳನ್ನು ತೆರೆದು ಬ್ಯಾಂಕಿನ ಆರ್ಥಿಕತೆ ಇನ್ನೂ ಸದೃಢವಾಗಿಸಲು ಅವಕಾಶಗಳು ಇರುವುದನ್ನು ಮನಗಂಡು ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರ ಹಾಗೂ ಕೆಲವು ಗ್ರಾಮೀಣ ಭಾಗಗಳಲ್ಲಿ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೌಲಭ್ಯದಿಂದ ಹೊರಗುಳಿದಿರುವ ಎಲ್ಲಾ ವರ್ಗದ ಜನರಿಗೆ ನೇರವಾಗಿ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ಬಗ್ಗೆ ಬೃಹತ್ ಕ್ರಿಯಾ ಯೋಜನೆ ರೂಪಿಸಿದೆ.

ಬ್ಯಾಂಕು ತುಮಕೂರು ನಗರದ ವಿವಿಧ ಬಡಾವಣೆಯಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಒಟ್ಟು 43 ಶಾಖೆಗಳನ್ನು ಹೊಂದಿ ತಮ್ಮೆಲ್ಲರ ಸಹಕಾರದಿಂದ ಉತ್ತಮ ಪ್ರಗತಿ ಸಾಧಿಸಿದೆ. ವರದಿ ಸಾಲಿನಲ್ಲಿಯೂ ಸಹ ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ `ಎ` ಶ್ರೇಣಿ ಗಳಿಸಿರುವ ಹೆಮ್ಮೆ ನಮ್ಮದಾಗಿರುತ್ತದೆ ಹಾಗೂ ದಿನಾಂಕ:31-03-2024ರ ಅಂತ್ಯಕ್ಕೆ ರೂ.155142.23ಲಕ್ಷಗಳ ಠೇವಣಿ ಸಂಗ್ರಹಿಸಲಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳವು ರೂ.250333.30ಲಕ್ಷಗಳಿದ್ದು, ವಿವಿಧ ಯೋಜನೆಯಡಿಯಲ್ಲಿ ರೂ.183840.97ಲಕ್ಷಗಳ ಸಾಲ ವಿತರಣೆ ಮಾಡಲಾಗಿದೆ.

ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು 2023-24ನೇ ಸಾಲಿನಲ್ಲಿ ಸಕಾಲಿಕ ಮತ್ತು ಸಮರ್ಪಕ ಸಾಲ ವಿತರಣೆ ವಸೂಲಾತಿ ಹಾಗೂ ಸಮಯೋಚಿತ ಹೂಡಿಕೆಗಳಿಂದ ಒಟ್ಟು ಲಾಭ ರೂ.2556.94ಲಕ್ಷಗಳು ಹಾಗೂ ರೂ.499.00ಲಕ್ಷಗಳ ನಿವ್ವಳ ಲಾಭ(ತಾತ್ಕಾಲಿಕ) ಗಳಿಸಿರುತ್ತದೆ. ಮುಂದಿನ ದಿನಗಳಲ್ಲಿ ಬ್ಯಾಂಕಿನ ಎಲ್ಲಾ ಸಾಧನೆಗಳ ಹಿಂದೆ ಎಲ್ಲರ ವಿಶ್ವಾಸ, ಪರಿಶ್ರಮ ಹಾಗೂ ಬೆಂಬಲ ಅಡಗಿರುತ್ತದೆ.

ಬ್ಯಾಂಕು ರೈತರಿಗೆ ಶೇಕಡ.0% ಬಡ್ಡಿದರದಲ್ಲಿ ನೀಡಿರುವ ಕೃಷಿ ಸಾಲಕ್ಕೆ ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರಗಳ ಯೋಜನೆಗಳಾದ ಬಡ್ಡಿ ರಿಯಾಯಿತಿ, ಬಡ್ಡಿ ಮನ್ನಾ ಹಾಗೂ ಇತರೇ ಯೋಜನೆಗಳಡಿಯಲ್ಲಿ ಜಿಲ್ಲೆಯಲ್ಲಿ 2022-23ನೇ ಸಾಲಿಗೆ ಒಟ್ಟು 479284 ಸದಸ್ಯರುಗಳಿಗೆ ಒಟ್ಟು ರೂ.5566.15ಲಕ್ಷಗಳ ಬಿಲ್ಲನ್ನು ಸಲ್ಲಿಸಿದ್ದು, ಸದರಿ ಬಿಲ್ಲಿನಲ್ಲಿ ಸರ್ಕಾರದಿಂದ ರೂ.1753.18ಲಕ್ಷಗಳು ಬ್ಯಾಂಕಿಗೆ ಜಮಾ ಬಂದಿದ್ದು, ಉಳಿಕೆ ರೂ.3812.97ಲಕ್ಷಗಳು ಸರ್ಕಾರದಿಂದ ಬಾಕಿ ಬರಬೇಕಾಗಿದ್ದು, ಸರ್ಕಾರದಿಂದ ಪಡೆಯುವ ಬಗ್ಗೆ ಕ್ರಮವಿಟ್ಟು, ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ.

ಬ್ಯಾಂಕಿನಿಂದ ಸಾಲ ಪಡೆದ 45663 ರೈತರಿಗೆ PAIS(Personal Accident Insurance Scheme) ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ಮಾಡಿಸಲಾಗಿದ್ದು, ಅವರ ಅವಲಂಬಿತರಿಗೆ ಹೆಚ್ಚಿನ ಭದ್ರತೆ ಒದಗಿಸಿದಂತಾಗಿರುತ್ತದೆ.

ಸರ್ಕಾರದ ''ಬಡವರಬಂಧು'' ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಈ ತಹಲ್‍ವರೆವಿಗೆ ಕರ್ನಾಟಕ ರಾಜ್ಯ ಸರ್ಕಾರದ ಬಡವರ ಬಂಧು ಯೋಜನೆಯಡಿಯಲ್ಲಿ ಒಟ್ಟು 6456 ಜನರಿಗೆ ಒಟ್ಟು ರೂ.575.25ಲಕ್ಷಗಳನ್ನು ಬ್ಯಾಂಕಿಗೆ ಯಾವುದೇ ಭದ್ರತೆ ಪಡೆದುಕೊಳ್ಳದೆ ಸಾಲ ನೀಡಲಾಗಿದ್ದು, 2022-23ನೇ ಸಾಲಿನಲ್ಲಿ 74 ಫಲಾನುಭವಿಗಳಿಗೆ ಒಟ್ಟು ರೂ.7.28ಲಕ್ಷಗಳ ಮೊತ್ತವನ್ನು ಬ್ಯಾಂಕಿನಿಂದ ನೀಡಲಾಗಿದೆ. ಸದರಿ ಸಾಲವು ಶೇ.100ರಷ್ಟು ವಸೂಲಾತಿಯಾಗಿರುತ್ತದೆ. ಇದು ಬಡವರ ಪರವಾದ ಕಾರ್ಯಕ್ರಮವಾಗಿರುತ್ತದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಬೆನ್ನೆಲುಬಾಗಿದ್ದು ಅವರು ವಾಸಿಸುವ ಸ್ಥಳದಲ್ಲಿ ಆರ್ಥಿಕ ಸೌಲಭ್ಯ ಒದಗಿಸುವಂತೆ ಮಾಡಲು ಈ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಚಿನ್ನಾಭರಣ ಸಾಲ, ನಗದು ಸಾಲ, ವಾಹನ ಸಾಲ ದಾಸ್ತಾನು ಸಾಲ, ಗೊಬ್ಬರದ ಸಾಲ, ಪಡಿತರ ಆಹಾರ ಸಾಲ ನೀಡಲು ಬ್ಯಾಂಕಿನಿಂದ ಕಡಿಮೆ ಬಡ್ಡಿದರದಲ್ಲಿ ಮೀರಳೆತ ಸಾಲ ಒದಗಿಸಲಾಗಿದ್ದು, ಈ ಪೈಕಿ ಒಟ್ಟು 42 ಸಂಘಗಳಿಂದ ರೂ.918.19ಲಕ್ಷಗಳು ಹೊರಬಾಕಿ ಇರುತ್ತದೆ ಹಾಗೂ ರೂ.23.46 ಲಕ್ಷ ಸಾಲ ಸುಸ್ತಿ ಇರುತ್ತದೆ. ಇದರಲ್ಲಿ ಮೀರೆಳತ ಸಾಲದ ಬಡ್ಡಿ ಮೊಬಲಗು Capitalise ಮಾಡದೆ ಸರಳ ಬಡ್ಡಿ ವಿಧಿಸಲಾಗುತ್ತಿದೆ.

ಹಾಲಿ ಇರುವ ಶಾಖೆಗಳ ಕಟ್ಟಡಗಳಲ್ಲಿ ಬ್ಯಾಂಕಿನ ಗ್ರಾಹಕರ ಅನುಕೂಲಕ್ಕಾಗಿ ಇತರೆ ವಾಣಿಜ್ಯ ಬ್ಯಾಂಕುಗಳಿಗೆ ಸ್ಪರ್ಧೆಯೊಡ್ಡುವಂತೆ ಕಟ್ಟಡದ ಹೊರ ವಿನ್ಯಾಸ ಮತ್ತು ಒಳವಿನ್ಯಾಸಗಳಲ್ಲಿ ನವೀಕರಿಸಿ ಗ್ರಾಹಕರ ಆಕರ್ಷಣಾ ಕೇಂದ್ರವನ್ನಾಗಿಸಿ ಬ್ಯಾಂಕಿನ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಈಗಾಗಲೇ ಕ್ರಮ ಕೈಗೊಂಡಿರುತ್ತದೆ.

ದಿನಾಂಕ:31.03.2023ರ ಅಂತ್ಯಕ್ಕೆ ಬ್ಯಾಂಕಿನ ವ್ಯಾಪ್ತಿಯಲ್ಲಿ 242 ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ನಮ್ಮ ಬ್ಯಾಂಕ್ ಗ್ರಾಮೀಣಾಭಿವೃದ್ದಿಗೆ ಹೆಚ್ಚು ಒತ್ತು ನೀಡಲು ಕ್ರಿಯಾ ಯೋಜನೆ ರೂಪಿಸಿದ್ದು, ಜಿಲ್ಲೆಯ 233 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತಾಪಿ ವರ್ಗದ ಆರ್ಥಿಕ ಬೇಡಿಕೆಗಳಿಗೆ ಸಕಾಲಕ್ಕೆ ಸ್ಪಂದಿಸುತ್ತಾ ಬಂದಿದೆ. ವರದಿ ಸಾಲಿನಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಚಿನ್ನಾಭರಣ ಸಾಲವನ್ನು ನೀಡಲಾಗುತ್ತಿದೆ.

ಕೇಂದ್ರ ಸರ್ಕಾರದ ಪುರಸ್ಕøತ ಯೋಜನೆಯಾದ “ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ” ಯೋಜನೆಯಡಿಯಲ್ಲಿ ತುಮಕೂರು ಡಿ ಸಿ ಸಿ ಬ್ಯಾಂಕ್‍ನಿ. ವ್ಯಾಪ್ತಿಗೆ ಬರುವ 230 ಪ್ರಾ ಕೃ ಪ ಸ ಸಂಘಗಳಿಗೆ ಹಾರ್ಡವೇರ್ ಉಪಕರಣಗಳು ಸರಬರಾಜು ಮಾಡಿ ಅನುಷ್ಟಾನಗೊಳಿಸಲಾಗಿದ್ದು ಗಣಕೀಕರಣ ಯೋಜನೆಯು ಪ್ರಗತಿಯಲ್ಲಿರುತ್ತದೆ.

ಜಿಲ್ಲೆಯಲ್ಲಿ ಇದುವರೆಗೆ ಸಾಲ ಸೌಲಭ್ಯದಿಂದ ವಂಚಿತರಾದ ರೈತ ಕುಟುಂಬಗಳಿಗೆ ಪ್ರತಿ ವರ್ಷ ಸಾಧ್ಯವಾದಷ್ಟು ಸಾಲ ಸೌಲಭ್ಯದ ವ್ಯಾಪ್ತಿಗೆ ಸೇರಿಸಿಕೊಂಡು ಹಂತ ಹಂತವಾಗಿ ಸಾಲ ನೀಡುವುದು ಬ್ಯಾಂಕಿನ ಗುರಿಯಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ 7632 ಹೊಸ ರೈತರಿಗೆ ರೂ.3113.80ಲಕ್ಷ ಸಾಲ ವಿತರಿಸಲಾಗಿದೆ. ಈ ಬಗ್ಗೆ ಬ್ಯಾಂಕಿನಿಂದ ಅರ್ಹ ರೈತ ಫಲಾನುಭವಿಗಳಿಗೆ ಜಾತ್ಯಾತೀತವಾಗಿ ಮತ್ತು ಪಕ್ಷಾತೀತವಾಗಿ ಬೆಳೆ ಸಾಲ ನೀಡಲಾಗುವುದು ಹಾಗೂ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪತ್ರಿಕಾ ಪ್ರಕಟಣೆಯನ್ನು ಸ್ಥಳೀಯ ದಿನ ಪತ್ರಿಕೆಗಳಲ್ಲಿ ಹಾಗೂ ಇತರೆ ಜಿಲ್ಲೆಯಾದ್ಯಂತ ಪ್ರಸಾರವಾಗುವ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ.

ಬ್ಯಾಂಕಿನಿಂದ 2014 ರಿಂದ 2021ನೇ ಸಾಲಿನವರೆವಿಗೆ ಮರಣ ಹೊಂದಿರುವ ರೈತರಿಗೆ ರೂ.1.00ಲಕ್ಷ ಮಿತಿಗೊಳಪಟ್ಟು 8214 ಸದಸ್ಯರುಗಳಿಗೆ ರೂ.26,53,36,000/-ಗಳ ಕೃಷಿ ಸಾಲವನ್ನು ಮನ್ನಾ ಮಾಡಲಾಗಿದೆ. 2021-22ನೇ ಮತ್ತು 2022-23ಸಾಲಿಗೆ ಅಂದರೆ ದಿನಾಂಕ:30-09-2022ರವರೆಗೆ ಒಟ್ಟು 5014 ಜನ ಮೃತ ರೈತ ಸದಸ್ಯರುಗಳಿಗೆ ರೂ.50000/-ಗಳ ಮಿತಿಗೊಳಪಟ್ಟು ರೂ.17,22,12,490/-ಗಳು ಒಟ್ಟಾರೆ 13228 ಜನ ಮೃತ ರೈತರಿಗೆ ಒಟ್ಟು ರೂ.43,75,48,490/-ಗಳ ಮೊತ್ತವನ್ನು ಸಾಲಮನ್ನಾ ಮಾಡಿ ಖೈದುಗೊಳಿಸಲಾಗಿರುವುದು ಈ ದೇಶದಲ್ಲಿಯೇ ನಮ್ಮ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾತ್ರ ಪ್ರಪ್ರಥಮ ಬ್ಯಾಂಕು ಆಗಿರುತ್ತದೆ ಹಾಗೂ ಈ ಯೋಜನೆಯನ್ನು ಜಾರಿಗೊಳಿಸಿರುವುದು ನಮ್ಮ ಬ್ಯಾಂಕಿನ ಹೆಗ್ಗಳಿಕೆಯಾಗಿರುತ್ತದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ಬ್ಯಾಂಕು ಈಗಾಗಲೇ ಎಲ್ಲಾ ಶಾಖೆಗಳನ್ನು ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಅಳವಡಿಸಿ ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ. ಈ ಮೂಲಕ ಬ್ಯಾಂಕಿನ ಗ್ರಾಹಕರು ಎಲ್ಲಾ ವಿಧದ ಬ್ಯಾಂಕಿಂಗ್ ಸೇವೆಯನ್ನು ಪಡೆಯಬಹುದಾಗಿರುತ್ತದೆ. ಈಗಾಗಲೇ ಸಿ.ಎನ್.ಹಳ್ಳಿ, ತುರುವೇಕೆರೆ, ಕ್ಯಾತ್ಸಂದ್ರ, ಸಿರಾ, ತಿಪಟೂರು, ಶ್ರೀದೇವಿ ಮೆಡಿಕಲ್ ಕಾಲೇಜು ಆವರಣ, ಮಲ್ಲಸಂದ್ರ, ಕುಣಿಗಲ್, ಅಂತರಸನಹಳ್ಳಿ, ಪಾವಗಡ, ಕೊಡಿಗೇನಹಳ್ಳಿ, ವೈ.ಎನ್.ಹೊಸಕೊಟೆ ಹಾಗೂ ಕೊರಟಗೆರೆ .ಶಾಖೆಗಳಲ್ಲಿ ಎಟಿಎಂ ಮೂಲಕ ಗ್ರಾಹಕರುಗಳಿಗೆ ಬ್ಯಾಂಕಿಂಗ್ ಸೇವೆಯನ್ನು ಒದಗಿಸಲಾಗುತ್ತಿರುತ್ತದೆ.

ನಬಾರ್ಡ್ ನಿರ್ದೇಶನದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೆಸಿಸಿ ಅಲ್ಪಾವಧಿ ಸಾಲ ಪಡೆದಿರುವ ರೈತ ಸದಸ್ಯರುಗಳ ಉಳಿತಾಯ ಖಾತೆ ತೆರೆದು ನೇರವಾಗಿ ಖಾತೆಯಲ್ಲಿ ವ್ಯವಹರಿಸಲು ಹಾಗೂ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ 107565 ರೈತ ಸದಸ್ಯರುಗಳಿಗೆ ರುಪೇಕಾರ್ಡುಗಳ್ನು ವಿತರಣೆ ಮಾಡಿರುವುದನ್ನು ತಿಳಿಸಲು ಹರ್ಷಿಸುತ್ತೇನೆ.

ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ತನ್ನ ದುಡಿಯುವ ಬಂಡವಾಳವನ್ನು ಉಪಯೋಗಿಸಿಕೊಂಡು ಜಿಲ್ಲೆಯ ಪ್ಯಾಕ್ಸ್ ಮತ್ತು ರೈತರ ಹಿತ ಕಾಪಾಡಿಕೊಂಡು ಈ ಕೆಳಗಿನ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಬ್ಯಾಂಕಿನಲ್ಲಿ ರೈತರು ಪಡೆಯುವ ಚಿನ್ನಾಭರಣ ಸಾಲದ ಬಡ್ಡಿದರದಲ್ಲಿ ಸಾಮಾನ್ಯ ಬಡ್ಡಿದರಕ್ಕಿಂತ ಶೇ.1ರ ಕಡಿಮೆ ಬಡ್ಡಿದರವನ್ನು ವಿಧಿಸಲಾಗುತ್ತಿದೆ.

ಪ್ಯಾಕ್ಸ್‍ಗಳನ್ನು ಗಣಕೀಕರಣಗೊಳಿಸಿ ಅ ಮೂಲಕ ರೈತರಿಗೆ ತ್ವರಿತ ಸೇವೆ ಒದಗಿಸಲು ಅಗತ್ಯವಾದ ಸಾಫ್ಟ್‍ವೇರ್‍ನ್ನು ಬ್ಯಾಂಕಿನ ಸ್ವಂತ ಬಂಡವಾಳದಿಂದ ಭರಿಸಲಾಗುತ್ತಿದೆ.

ಹಿಂದಿನ ಸಾಲಿನಲ್ಲಿ ಉದ್ದೇಶಿಸಿದಂತೆ ತುಮಕೂರು ಜಿಲ್ಲೆಯಾದ್ಯಂತ ಹೊಂದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಟ್ಟಡಗಳೆಂದು ಗುರುತಿಸುವ ಉದ್ದೇಶದಿಂದ ಕಟ್ಟಡದ ಹೊರಾಂಗಣದ ಗೋಡೆಗೆ ಸಹಕಾರಿ ತತ್ವ ಸೂಚಿಸುವ ಧ್ವಜದ ಬಣ್ಣಗಳ ಲೇಪನವನ್ನು ತುಮಕೂರು, ಮಧುಗಿರಿ, ಕೊರಟಗೆರೆ ಗುಬ್ಬಿ ಹಾಗೂ ಸಿರಾ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ ಸಂಘಗಳಿಗೆ ಸದರಿ ಕಾರ್ಯವನ್ನು ಮಾಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ತಾಲ್ಲೂಕುಗಳ ಸಂಘಗಳ ಕಟ್ಟಡದ ಹೊರಾಂಗಣದ ಗೋಡೆಗೆ ಸಹಕಾರಿ ತತ್ವದ ಬಣ್ಣಗಳನ್ನು ಲೇಪನ ಮಾಡುವ ಕಾರ್ಯವನ್ನು ಪ್ರಸಕ್ತ ಸಾಲಿನಲ್ಲಿಯೂ ಮುಂದುವರೆಸಲಾಗುವುದು ಎಂದು ತಿಳಿಸಲು ಹರ್ಷಿಸುತ್ತೇನೆ.

ಅದೇ ರೀತಿ ಬ್ಯಾಂಕಿನ ಸ್ವಂತ ಬಂಡವಾಳದಲ್ಲಿ ಪ್ಯಾಕ್ಸ್‍ಗಳ ಕಟ್ಟಡ ನಿರ್ಮಾಣ/ದುರಸ್ತಿ/ಕೌಂಟರ್ ನಿರ್ಮಾಣ ಕಂಪ್ಯೂಟರೀಕರಣಕ್ಕೆ/ಪೀಠೋಪಕರಣಗಳಿಗೆ ಧನ ಸಹಾಯ ಒದಗಿಸಲಾಗುತ್ತಿದೆ ಮತ್ತು ಸಂಘಗಳಿಗೆ ಚಿನ್ನಾಭರಣ ಸಾಲ ನೀಡಿ ಆರ್ಥಿಕಾಭಿವೃದ್ದಿ ಹೊಂದಲು ಸಂಘಕ್ಕೆ ಉಚಿತವಾಗಿ ಭದ್ರತಾ ತಿಜೋರಿಯನ್ನು ಸಹ ನೀಡಲಾಗುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಬ್ಯಾಂಕು ಅನುಷ್ಠಾನಗೊಳಿಸಿರುತ್ತದೆ ಮತ್ತು ಸರ್ಕಾರದ ಹಂತದಲ್ಲಿ ನಿಗಧಿಪಡಿಸಿರುವ ಅಲ್ಪಾವಧಿ/ಮಧ್ಯಮಾವಧಿ ಕೃಷಿ ಸಾಲದ ಗುರಿಗಳನ್ನು ಸಾಧಿಸಿರುವುದನ್ನು ಸಹ ತಿಳಿಸಲು ಹರ್ಷಿಸುತ್ತೇನೆ.

ಬ್ಯಾಂಕಿನ ಪ್ರಗತಿಗೆ ಸಹಕರಿಸಿದ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಗಳು, ಮಾನ್ಯ ಸಚಿವರುಗಳಿಗೆ, ಸಂಸತ್ ಸದಸ್ಯರುಗಳಿಗೆ, ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ, ಸರ್ಕಾರದ ಎಲ್ಲಾ ಅಧಿಕಾರಿಗಳಿಗೆ, ಭಾರತೀಯ ರಿಸರ್ವ್ ಬ್ಯಾಂಕ್‍ನವರಿಗೆ, ನಬಾರ್ಡ್ ಸಂಸ್ಥೆಗೆ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿಗೆ, ಸಹಕಾರಿ ಇಲಾಖೆಗೆ, ಜಿಲ್ಲಾ ಸಮಸ್ತ ಸಹಕಾರ ಸಂಘಗಳಿಗೆ, ನಮ್ಮ ಗೌರವಾನ್ವಿತ ಗ್ರಾಹಕರಿಗೆ ಹಾಗೂ ಬ್ಯಾಂಕಿನ ಪ್ರಗತಿಗೆ ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮದವರು ನೀಡುತ್ತಿರುವ ಬೆಂಬಲ ಹಾಗೂ ತೋರುತ್ತಿರುವ ಸದ್ಭಾವನೆಗಳಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಪರವಾಗಿ ಮತ್ತು ವೈಯಕ್ತಿಕವಾಗಿ ಹೃತ್ಪೂರ್ವಕವಾಗಿ ವಂದಿಸುತ್ತೇನೆ.

ಬ್ಯಾಂಕಿನ ಆಡಳಿತವನ್ನು ನಡೆಸಲು ಸಹಕರಿಸಿದ ಬ್ಯಾಂಕಿನ ಎಲ್ಲಾ ಆಡಳಿತ ಮಂಡಳಿಯ ಸದಸ್ಯರಿಗೆ ಹಾಗೆಯೇ ಬ್ಯಾಂಕಿನ ಸಿಬ್ಬಂದಿ ವರ್ಗದ ದಕ್ಷ ಹಾಗೂ ಪ್ರಾಮಾಣಿಕ ಕರ್ತವ್ಯ ನಿರ್ವಹಣೆಗಾಗಿ ಅವರನ್ನು ಅಭಿನಂದಿಸುತ್ತಾ, ನಮ್ಮ ಮುಂದಿನ ಯೋಜನೆಗಳನ್ನು ಯಶಸ್ವಿಗೊಳಿಸಲು ತಮ್ಮೆಲ್ಲರ ಸಹಕಾರವನ್ನು ನೀಡಲು ಅಪೇಕ್ಷಿಸುತ್ತೇನೆ.

ಸಹಕಾರಿ ಶುಭಾಶಯಗಳೊಂದಿಗೆ,

ತಮ್ಮ ವಿಶ್ವಾಸಿ                               

(ಕೆ.ಎನ್.ರಾಜಣ್ಣ)                         
ಮಾನ್ಯ ಸಹಕಾರ ಸಚಿವರು, ಕರ್ನಾಟಕ ಸರ್ಕಾರ ಹಾಗೂ     
ಅಧ್ಯಕ್ಷರು ತುಮಕೂರು ಡಿಸಿಸಿ ಬ್ಯಾಂಕ್ ನಿಯಮಿತ., ತುಮಕೂರು